ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಎಲ್ಲ ಸದಸ್ಯ ಮಿತ್ರರಿಗೆ ನಮಸ್ಕಾರ ಹಾಗೂ ಹೃದಯಪೂರ್ವಕ ಸ್ವಾಗತ. ಸ್ವ್ಯಾಬ್ ಚಟುವಟಿಕೆಗಳಿಗೆ ಬೆಲೆಯುಳ್ಳ ಸಲಹೆಗಳನ್ನು ನೀಡುತ್ತಾ ಬಂದಿರುವ ಮಾಜಿ ಅಧ್ಯಕ್ಷರಾದ ಶ್ರೀ ಕಲ್ಯಾಣ್ ಅಶೋಕ್ ಹಾಗೂ ಶ್ರೀ ಎಂ.ಎ.ಪೊನ್ನಪ್ಪ ಅವರಿಗೆ ವಿಶೇಷವಾಗಿ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಾ ವಾರ್ಷಿಕ ವರದಿಯನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಜೊತೆಗೆ ದಶಕದ ನಂತರ ಬೆಂಗಳೂರಿಗೆ ಹಿಂದಿರುಗಿರುವ ನಮ್ಮೆಲ್ಲರ ಆತ್ಮೀಯರಾದ ಶ್ರೀ ಗೋಪಾಲಕೃಷ್ಣ ಹೆಗಡೆ ಅವರಿಗೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘದ 2011ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಗೆ ಸ್ವಾಗತಿಸುತ್ತೇನೆ. ಹೆಗಡೆ ಅವರು ಈ ಹಿಂದೆ ಸ್ವ್ಯಾಬ್ ಚಟುವಟಿಕೆಗಳ ಜೀವನಾಡಿ ಆಗಿದ್ದವರು. ಅವರು ಮತ್ತೆ ನಮ್ಮೊಂದಿಗೆ ಇದ್ದಾರೆ. ಅವರು ಈ ಹಿಂದೆ ಸ್ವ್ಯಾಬ್ ಗಾಗಿ ಮಾಡಿದ ಕೆಲಸಗಳು ನಮಗೆ ಈಗಲೂ ಪ್ರೇರಣೆ.
2011ನೇ ಸಾಲು ಬೆಂಗಳೂರು ಕ್ರೀಡಾ ಬರಹಗಾರರ ಸಂಘದ 35ನೇ ಸ್ಥಾಪನಾ ವರ್ಷವಾಗಿದೆ. ಆದ್ದರಿಂದ ಈ ವರ್ಷವನ್ನು ವಿಶಿಷ್ಟವಾದ ಚಟುವಟಿಕೆಗಳಿಂದ ಅಲಂಕರಿಸಬೇಕು ಎನ್ನುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಈಗಾಗಲೇ ಹಲವಾರು ಚಟುವಟಿಕೆಗಳನ್ನು ನಾವು ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರ ಸಹಕಾರದಿಂದ ಮಾಡಿದ್ದೇವೆ. ನನ್ನೊಂದಿಗೆ ಉತ್ಸಾಹದಿಂದ ಕೈಜೋಡಿಸಿ, ಪ್ರೋತ್ಸಾಹ ನೀಡುತ್ತಾ, ಎಲ್ಲ ಕಾರ್ಯಕ್ರಮ ನಡೆಸಲು ಹುಮ್ಮಸ್ಸು ನೀಡಿದ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ. ಜೊತೆಗೆ ರೂಪಿಸಿದೆಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉತ್ಸಾಹ ಹೆಚ್ಚಿಸಿದ ಎಲ್ಲ ಸದಸ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ.
ಸ್ವ್ಯಾಬ್ ಎನ್ನುವುದು ವರ್ಷಕ್ಕೊಮ್ಮೆ ಪ್ರಶಸ್ತಿ ನೀಡುವ ವೇದಿಕೆಯಾಗಿ ಮಾತ್ರ ಉಳಿಯಬಾರದು ಎನ್ನುವುದು ಕಾರ್ಯಕಾರಿ ಸಮಿತಿ ಆಶಯ. ಆದ್ದರಿಂದ ಸದಸ್ಯರಿಗೆ ಪ್ರಯೋಜನವಾಗುವಂಥ ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗುವಂಥ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವುದು ಕಾರ್ಯಕಾರಿ ಸಮಿತಿ ಉದ್ದೇಶ. ಆ ನಿಟ್ಟಿನಲ್ಲಿ ಈ ವರ್ಷ ಹಲವಾರು ಕಾರ್ಯಕ್ರಮಗಳನ್ನು ಸ್ವ್ಯಾಬ್ ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಮಾಡಿದೆ.
ವರ್ಷದ ಆರಂಭದಲ್ಲಿಯೇ ಕರ್ನಾಟಕ ಲೆಗ್ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಕ್ರೀಡಾ ಶಿಕ್ಷಕರೊಂದಿಗೆ ನಮ್ಮ ಕ್ರೀಡಾ ವರದಿಗಾರರು ವಿಶಿಷ್ಟವಾದ ಲೆಗ್ ಕ್ರಿಕೆಟ್ ಪಂದ್ಯವನ್ನು ಆಡಿ ಸಂತಸಪಟ್ಟಿದ್ದಾರೆ. ವಿಶೇಷವೆಂದರೆ ಕ್ರೀಡಾ ಪತ್ರಕರ್ತರ ತಂಡವೇ ಆ ಪಂದ್ಯದಲ್ಲಿ ವಿಜಯ ಸಾಧಿಸಿತು. ಆನಂತರ ಕರ್ನಾಟಕ ರಾಜ್ಯ ಫುಟ್ ಬಾಲ್ ಸಂಸ್ಥೆಯ ಸಹಕಾರದೊಂದಿಗೆ ಮಾಜಿ ಫುಟ್ ಬಾಲ್ ಆಟಗಾರರ ಜೊತೆಗೆ ಫುಟ್ ಬಾಲ್ ಪ್ರದರ್ಶನ ಪಂದ್ಯವನ್ನು ಕೂಡ ನಮ್ಮ ಕ್ರೀಡಾ ವರದಿಗಾರರ ತಂಡ ಆಡಿತು. ಈ ಪಂದ್ಯವನ್ನು ಸಂಘಟಿಸುವಲ್ಲಿ ಶ್ರೀಕುಮಾರ್ ಅವರು ತೋರಿದ ಆಸಕ್ತಿಯನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಕರ್ತವ್ಯ.
ಭಾರಿ ಉತ್ಸಾಹದಿಂದ ನಡೆದ ಸ್ವ್ಯಾಬ್ ಸ್ನೂಕರ್ ಟೂರ್ನಿಯನ್ನು ಬೆಂಗಳೂರು ವಿಹಾರ ಕೇಂದ್ರ ಹಾಗೂ ಕದಿರೇನಹಳ್ಳಿ ಸ್ನೂಕರ್ ಪಾಯಿಂಟ್ ಸಹಯೋಗದಲ್ಲಿ ನಡೆಸಲಾಯಿತು. ಅದರಲ್ಲಿ ಮೂವತ್ತಕ್ಕೂ ಹೆಚ್ಚು ಕ್ರೀಡಾ ವರದಿಗಾರರು ಹಾಗೂ ಕ್ರೀಡಾ ಛಾಯಾಗ್ರಾಹಕರು ಹಾಗೂ ಮಾಧ್ಯಮ ವರದಿಗಾರರು ಪಾಲ್ಗೊಂಡು ಸಂತಸ ಹಂಚಿಕೊಂಡರು. ಆರ್. ಸತ್ಯ ಅವರು ಈ ಟೂರ್ನಿಯಲ್ಲಿ ತಮ್ಮ ಪ್ರಭಾವಿ ಆಟದಿಂದ ಚಾಂಪಿಯನ್ ಆಗಿ ಹೊರಹೊಮ್ಮಿದರು. ಆರ್. ಸತ್ಯ ಅವರು ಪುಣೆಯಲ್ಲಿ ನಡೆದ ಎಸ್.ಜೆ.ಎಫ್.ಐ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು, ಅದರ ಅಂಗವಾಗಿ ನಡೆದ ಕ್ರೀಡಾ ಚಟುವಟಿಕೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಕೂಡ ಗೆದ್ದು ಗಮನ ಸೆಳೆದಿದ್ದಾರೆ. ಮಲ್ಲಿಕಾಚರಣ ವಾಡಿ, ಅಭಿಷೇಕ್ ಬಾಡ್ಕರ್, ಸತೀಶ್ ವಿಶ್ವನಾಥ್, ಸತೀಶ್ ಪಾಲ್, ಮೊಹಮ್ಮದ್ ನೂಮಾನ್ ಹಾಗೂ ಓಂಕಾರ ಮೂತರ್ಿ ಅವರೂ ಎಸ್.ಜೆ.ಎಫ್.ಐ ವಾರ್ಷಿಕ ಸಮಾವೇಶದಲ್ಲಿ ಬೆಂಗಳೂರು ಕ್ರೀಡಾ ವರದಿಗಾರರ ಸಂಘವನ್ನು ಪ್ರತಿನಿಧಿಸಿದ್ದರು.
ಕಳೆದ ಬಾರಿಯ ವಾರ್ಷಿಕ ಸರ್ವಸದಸ್ಯರ ಸಭೆಗೆ ಮುನ್ನ ನಾನು ನೀಡಿದ್ದ ಭರವಸೆಯಂತೆ ಹಲವಾರು ಕೆಲಸಗಳನ್ನು ಪೂರೈಸುವ ಪ್ರಯತ್ನವನ್ನು ಕಾರ್ಯಕಾರಿ ಸಮಿತಿಯ ಸಹಕಾರದಿಂದ ಮಾಡಿ ಮುಗಿಸಲು ಪ್ರಯತ್ನ ಮಾಡಿದ್ದೇನೆ. ಸ್ವ್ಯಾಬ್ ಸದಸ್ಯರಿಗೆ ಆಕರ್ಷಕವಾದ ಸದಸ್ಯತ್ವದ ಕಾರ್ಡ್ ನೀಡಲಾಗಿದೆ. ಅದರ ಜೊತೆಗೆ ಪ್ರೇಮಾ ಡೇವಿಡ್ ಅವರು ಕೊಡುಗೆಯಾಗಿ ನೀಡಿದ ಕಾರ್ಡ್ ಹೋಲ್ಡರ್ ಕೂಡ ನೀಡಲಾಗಿದೆ. ಒಟ್ಟು 37 ಸದಸ್ಯರು ತಮ್ಮ ಸದಸ್ಯತ್ವದ ಫಾರ್ಮ್ ನೀಡಿದ್ದಾರೆ. ಇನ್ನೂ ಅನೇಕ ಸದಸ್ಯರು ಸದಸ್ಯತ್ವದ ಫಾರ್ಮ್ ನೀಡಿಲ್ಲ. ಅವರು ಕೂಡ ಸದಸ್ಯತ್ವದ ಫಾರ್ಮ್ ನೀಡಿ, ತಮ್ಮ ಸದಸ್ಯತ್ವದ ಕಾರ್ಡ್ ಪಡೆದುಕೊಳ್ಳಬೇಕಾಗಿ ಈ ಸಂದರ್ಭದಲ್ಲಿ ನಾನು ಕೇಳಿಕೊಳ್ಳುತ್ತೇನೆ.
"ಸ್ವ್ಯಾಬ್ ರಿಪೋರ್ಟರ್ ಬ್ಲಾಗ್" ಕಳೆದ ಎಂಟು ತಿಂಗಳಿಂದ ಸಾಕಷ್ಟು ಓದುಗರನ್ನು ಸೆಳೆದಿದೆ. ಕ್ರೀಡಾ ವರದಿಗಾರರ ವಿವಿಧ ಚಟುವಟಿಕೆ ಹಾಗೂ ಅನುಭವದ ಬುತ್ತಿಯನ್ನು ಜನರೊಂದಿಗೆ ಹಂಚಿಕೊಳ್ಳಲು ಇದೊಂದು ವಿಶಿಷ್ಟವಾದ ಬ್ಲಾಗ್ ಆಗಿದೆ. ಇದು ಈಗಾಗಲೇ ಎಂಬತ್ತು ಸಾವಿರಕ್ಕೂ ಹೆಚ್ಚು ಹಿಟ್ಸ್ ಗಳನ್ನು ಹೊಂದಿದೆ. ಇಂಗ್ಲಿಷ್ ಲೇಖನಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದಂತೂ ನಿಜ. ಪಿ.ಆರ್.ವಿಶ್ವನಾಥ್ ಅವರು ರಾಜನ್ ಬಾಲಾ ಕುರಿತು ಬರೆದ ಲೇಖನಕ್ಕೆ ಒಂದೇ ದಿನದಲ್ಲಿ 9000 ಹಿಟ್ಸ್ ಬಂದಿದ್ದು ವಿಶೇಷ. ಅಂಥ ಅನುಭವಪೂರ್ಣವಾದ ಹಾಗೂ ಮನತಟ್ಟುವಂಥ ಲೇಖನಗಳನ್ನು ತಾವು ಕೂಡ ಸ್ವ್ಯಾಬ್ ರಿಪೋರ್ಟರ್ ಬ್ಲಾಗ್ ಗಾಗಿ ಬರೆದು ಕಳುಹಿಸಬೇಕೆಂದು ವಿನಂತಿಸುತ್ತೇನೆ.
"ಸ್ವ್ಯಾಬ್ ಫೋರಂ" ವೆಬ್ಸೈಟ್ ಅಂತಿಮ ರೂಪವನ್ನು ಪಡೆದಿದ್ದು ಶೀಘ್ರದಲ್ಲಿಯೇ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ. ಅದನ್ನು ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಲಾಂಚ್ ಮಾಡುವುದು ಕಾರ್ಯಕಾರಿ ಸಮಿತಿ ಉದ್ದೇಶವಾಗಿದೆ. ಸ್ವ್ಯಾಬ್ ಖಜಾನೆಯಂತೆ ಇರುವ ಪ್ರೆಸ್ ಕ್ಲಬ್ ನಲ್ಲಿನ ಅಲ್ಮಾರಿಯಲ್ಲಿ ಅನೇಕ ನೆನಪುಗಳು ಚಿತ್ರಗಳಾಗಿ ಲಭ್ಯವಿವೆ. ಅವೆಲ್ಲವನ್ನೂ ಸ್ವ್ಯಾಬ್ ಫೋರಂ ಮೂಲಕ ಆನ್ ಲೈನ್ನಲ್ಲಿ ಹರಿಬಿಡಲು ವ್ಯವಸ್ಥೆ ಮಾಡಲಾಗಿದೆ. ಸ್ವ್ಯಾಬ್ ಫೋರಂ ವೆಬ್ ಸೈಟ್ ಗಾಗಿ ಸ್ವ್ಯಾಬ್ ಇತಿಹಾಸದ ಕುರಿತು ಪಿ.ಆರ್.ವಿಶ್ವನಾಥ್ ಅವರು ವಿಶಿಷ್ಟವಾದ ಲೇಖನವನ್ನು ಬರೆದುಕೊಟ್ಟಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ.
ಕಷ್ಟದಲ್ಲಿರುವ ಕ್ರೀಡಾ ವರದಿಗಾರರಿಗೆ ಸಾಧ್ಯವಾದ ಮಟ್ಟಿಗೆ ಆರ್ಧಿಕ ನೆರವು ನೀಡುವುದು ಸ್ವ್ಯಾಬ್ ಹೃದಯವಂತಿಕೆಯಾಗಿದೆ. ಮುಂಬೈನ ಪ್ರದೀಪ್ ವಿಜಯಕರ್ ಅವರ ವೈದ್ಯಕೀಯ ವೆಚ್ಚಕ್ಕಾಗಿ ಸ್ವ್ಯಾಬ್ ಮೂಲಕ ಈ ಬಾರಿ 15,000 ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ.
ಸ್ವ್ಯಾಬ್ ಗಾಗಿ ಕಂಠೀರವ ಕ್ರೀಡಾಂಗಣದಲ್ಲಿ ಕೋಣೆಯೊಂದನ್ನು ಪಡೆಯುವುದು ಉದ್ದೇಶವಾಗಿತ್ತು. ಈ ವಿಷಯವಾಗಿ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರಿಗೆ ವಿನಂತಿಯನ್ನು ನೀಡಲಾಗಿತ್ತು. ಎಂ.ಎ.ಪೊನ್ನಪ್ಪ ಅವರ ಪ್ರಯತ್ನದ ಫಲವಾಗಿ ಕೋಣೆ ಸ್ವ್ಯಾಬ್ಗೆ ಸಿಗುವ ಹಂತದಲ್ಲಿ ಇದ್ದಾಗಲೇ, ತೊಡಕು ಎದುರಾಯಿತು. ಆದರೂ ಮತ್ತೆ ಎಂ.ಎ.ಪೊನ್ನಪ್ಪ ಅವರ ಬೆಂಬಲದೊಂದಿಗೆ ಕೋಣೆಯನ್ನು ಪಡೆಯಲು ಪ್ರಯತ್ನ ಮಾಡುತ್ತೇವೆ ಎನ್ನುವ ಭರವಸೆಯನ್ನು ಕಾರ್ಯಕಾರಿ ಸಮಿತಿ ಪರವಾಗಿ ತಮಗೆ ನೀಡುತ್ತೇನೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸ್ವ್ಯಾಬ್ ತನ್ನದೇ ಆದ ಕ್ಲಬ್ ಹೊಂದುವುದಕ್ಕೆ ಅಗತ್ಯವಿರುವ "ಸಿಎ" ಸೈಟ್ವೊಂದನ್ನು ನೀಡುವುದಕ್ಕೆ ಸಿದ್ಧವಿದೆ. ಅದಕ್ಕಾಗಿ ಮೂರು ಸ್ಥಳಗಳನ್ನು ಈಗಾಗಲೇ ತೋರಿಸಿದೆ. ಆದರೆ ಅವೆಲ್ಲವೂ ಬೆಂಗಳೂರು ಕೇಂದ್ರ ಭಾಗದಿಂದ ಬಹಳ ದೂರದಲ್ಲಿವೆ. ಆದ್ದರಿಂದ ತಮ್ಮ ಗಮನಕ್ಕೆ ಬೆಂಗಳೂರು ಕೇಂದ್ರ ಭಾಗದಲ್ಲಿ ಯಾವುದಾದರೂ ಖಾಲಿ "ಸಿಎ" ಸೈಟ್ ಗಮನಕ್ಕೆ ಬಂದರೆ ಅಲ್ಲಿ ಸ್ವ್ಯಾಬ್ ಕ್ಲಬ್ ಸ್ಥಾಪಿಸಲು ಅಗತ್ಯವಾದ ಪ್ರಕ್ರಿಯೆ ನಡೆಸಬಹುದು.
ಮುಂಬೈ, ಕೋಲ್ಕತ್ತ, ಚೆನ್ನೈ, ಅಹಮದಾಬಾದ್, ಚಂಡೀಗಡದಲ್ಲಿ ಕ್ರೀಡಾ ಪತ್ರಕರ್ತರಿಗೆ ನೀಡಲಾಗಿರುವ ವಿಶೇಷ ಸರ್ಕಾರಿ ಮಾನ್ಯತಾ ಪತ್ರವು ಬೆಂಗಳೂರಿನ ಕ್ರೀಡಾ ವರದಿಗಾರರಿಗೂ ಲಭ್ಯವಾಗುವಂತೆ ಮಾಡುವುದು ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ದಾಖಲೆಗಳನ್ನು ಒಗ್ಗೂಡಿಸಿ, ವಾರ್ತಾ ಮತ್ತು ಪ್ರಚಾರ ಇಲಾಖೆಗೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ.
2012ರಲ್ಲಿ ಬೆಂಗಳೂರು ಕ್ರೀಡಾ ವರದಿಗಾರರ ಸಂಘವು ಎಸ್.ಜೆ.ಎಫ್.ಐ ವಾರ್ಷಿಕ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲು ಬಯಸಿದೆ. ಅದಕ್ಕಾಗಿ ಬಿಡ್ ಪ್ರಕ್ರಿಯೆಗೆ ತಯಾರಿ ನಡೆದಿದೆ. ಆ ವಿಷಯವಾಗಿ ತಾವೆಲ್ಲರೂ ತಮ್ಮ ಬೆಂಬಲ ಹಾಗೂ ಸಹಕಾರವನ್ನು ನೀಡಬೇಕಾಗಿ ವಿನಂತಿ ಮಾಡುತ್ತಾ ನನ್ನ ಈ ವರದಿಯನ್ನು ಕೊನೆಗೊಳಿಸುತ್ತೇನೆ.
ಎಲ್ಲರಿಗೂ ಧನ್ಯವಾದಗಳು.
ಡಿ.ವಿ.ಗರುಡ
ಕಾರ್ಯದರ್ಶಿ,
ಬೆಂಗಳೂರು ಕ್ರೀಡಾ ಬರಹಗಾರರ ಸಂಘ