`ಪತ್ರಿಕಾ ದಿನ' ...ಮೊಗ್ಲಿಂಗ್ ಸ್ಮರಣೆ

ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ
"ಪ್ರಜಾವಾಣಿ" ಸಹಾಯಕ ಸಂಪಾದಕರಾದ
ಎಂ.ಎ.ಪೊನ್ನಪ್ಪ ಅವರು ಪತ್ರಿಕಾ
ದಿನದಂದು ಮಾಡಿದ ಭಾಷಣ


ಪ್ರತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ `ಪತ್ರಿಕಾ ದಿನ' ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮದ ಸ್ಥಿತಿಗತಿಗಳ ಕುರಿತು ಈ ದಿನ ಚರ್ಚೆ ನಡೆಯುವುದು ಕೂಡ ಅಷ್ಟೇ ಸಹಜ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗಾಗಬೇಕು ಅದೇ ಇಂಥದೊಂದು ದಿನವನ್ನು ಆಚರಿಸುವ ವಿಶೇಷ. ಜನ ಸಾಮಾನ್ಯರ ಒಳಿತಿಗೆ ನಿರಂತರ ದುಡಿಯುವ ಪತ್ರಕರ್ತರ ಬೆನ್ನು ಚಪ್ಪರಿಸಬೇಕೆನ್ನುವುದು ಈ ದಿನಾಚರಣೆಯ ಸದುದ್ದೇಶ.

ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಮುದ್ರಣ ಕಲೆ ಮಹತ್ತರ ಪಾತ್ರ ವಹಿಸಿದೆ. ಮುದ್ರಣ ಮಾಧ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದಿದೆ ಹಾಗೂ ಪರಿಚಯಿಸಿಕೊಟ್ಟಿದೆ. ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು. ಜರ್ಮನಿಯ ಜಾನ್ ಗುಟೆನ್ ಬರ್ಗ್ 1440ರಲ್ಲಿ ಎರಕಹೊಯ್ದ ಅಚ್ಚುಮೊಳೆ ತಯಾರಿಸಿ, ಪವಿತ್ರ ಗ್ರಂಥ `ದಿ ಬೈಬಲ್' ಅನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ, ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು. ಮುದ್ರಣ ಜ್ಞಾನದ ದಾಹ ತಣಿಸುವ ಪ್ರಮುಖ ಸೆಲೆಯಾಯಿತು. ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ ಹಲವೇ ಸಾಧನೆಗಳಲ್ಲಿ ಮುದ್ರಣಯಂತ್ರ ಸಹ ಒಂದು ಎಂದು ಆಧುನಿಕ ಇತಿಹಾಸಕಾರರು ಒಪ್ಪಿಕೊಂಡಿದ್ದಾರೆ.

ಯೇಸುಕ್ರಿಸ್ತನ ಸಂದೇಶಗಳನ್ನು ಜಗತ್ತಿಗೆ ತಿಳಿಸಬೇಕೆಂಬ ಹಂಬಲದಿಂದ ಯುರೋಪಿನಲ್ಲಿ ಹಲವು ಧರ್ಮಪ್ರಸಾರ ಸಂಸ್ಥೆಗಳು ಹುಟ್ಟಿಕೊಂಡವು. ಜರ್ಮನಿ-ಪ್ರಾನ್ಸ್ ದೇಶಗಳ ಗಡಿಗೆ ಹೊಂದಿಕೊಂಡಿರುವ ಪುಟ್ಟ ಪಟ್ಟಣವಾದ ಬಾಸೆಲ್ ನಲ್ಲಿ ಅಂದಿನ ಜನ ಯುರೋಪಿನಲ್ಲಿನ ಯುದ್ಧಗಳಿಂದ ಬೇಸತ್ತಿದ್ದರು. ದೇವರ ಸೇವೆ ಮಾಡಿದರೆ ಶಾಂತಿ ನೆಲಸಬಹುದೆಂಬ ಸದುದ್ದೇಶದಿಂದ ಆರು ಜನ ಪ್ರಮುಖರು ಕಟ್ಟಿದ ಧರ್ಮಪ್ರಸಾರ ಸಂಸ್ಥೆ ಮುಂದೆ ಬಾಸೆಲ್ ಮಿಷನ್ ಎಂದು ಹೆಸರಾಯಿತು.

ಸ್ಯಾಮುಯಲ್ ಹೆಬಿಕ್ ಸೇರಿದಂತೆ ಮೂವರು 1834ರಲ್ಲಿ ಕಲ್ಲಿಕೋಟಿ ತಲುಪಿದರು. ನಂತರ ಮಂಗಳೂರಿಗೆ ಪಯಣಿಸಿದರು. ಬ್ರಿಟಿಷರ ಆಡಳಿತಕ್ಕೆ ಭಾರತ ಒಳಪಟ್ಟಿದ್ದರಿಂದ, ಬಾಸೆಲ್ ಧರ್ಮಪ್ರಚಾರ ಸಂಸ್ಥೆ ವಿಶೇಷ ಅನುಮತಿಯನ್ನು ಪಡೆದು, ತಮ್ಮ ಕಾರ್ಯಚಟವಟಿಕೆಗಳನ್ನು ಆರಂಭಿಸಿದರು. 168 ವರ್ಷಗಳ ಇತಿಹಾಸದ ಈ ಮಹಾನ್ ಸಂಸ್ಥೆ ಕನ್ನಡಿಗರಿಗೆ ಮೊದಲ ಸಲ ಮುದ್ರಣ ಕಲೆ ಪರಿಚಯಿಸಿತು. ಭಾರತದ ಮೊದಲ ಪತ್ರಿಕೆ 1780ರಲ್ಲೇ ಆರಂಭಿವಾಗಿತ್ತು. ಕಲ್ಕತ್ತಾ ನಗರದಲ್ಲಿ ಅದು ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿತ್ತು.

ಧರ್ಮ ಪ್ರಸಾರದ ಜತೆಗೆ ಅನೇಕ ಉಪಯುಕ್ತವಾದ ಶೈಕ್ಷಣಿಕ ಹಾಗೂ ಕೈಗಾರಿಕಾ ತರಬೇತಿಗಳನ್ನು ಈ ಸಂಸ್ಥೆ ಆರಂಭಿಸಿತು. 1843ರಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿ ನಿಖರವಾದ ಸುದ್ದಿಯನ್ನು ಜನತೆಗೆ ನೀಡಬೇಕೆಂದು ನಿರ್ಧರಿಸಿತು. ಅಂಚೆ ಸೌಲಭ್ಯ ಬಿಟ್ಟರೆ, ಉಳಿದ ಯಾವ ಬಗೆಯ ಸಂಪರ್ಕ ಸಾಧನಗಳಿರಲಿಲ್ಲ. ಗಾಳಿ ಸುದ್ದಿಗೆ ಹೆಚ್ಚಿನ ಪ್ರಧಾನವಿತ್ತು. ಈ ಮಹತ್ಕಾರ್ಯದ ರೂವಾರಿ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್. ಕನ್ನಡ ಪತ್ರಿಕೋದ್ಯಮದ ಮೂಲಪುರುಷ.

"ಕಿಟಕಿಯಿರದ ಬಿಡಾರದಲ್ಲಿರುವ ಜನರಿಗೆ ಪತ್ರಿಕೆಗಳ ಮೂಲಕ ನಾಲ್ಕು ದಿಕ್ಕಿಗೆ ಬೆಳಕು ಬಿರುವ ಹಾಗೆ" ಸಮಾಚಾರ ನಿಡುವ ಪಾಕ್ಷಿಕ ಪ್ರಕಟಣೆಯಾದ "ಮಂಗಳೂರು ಸಮಾಚಾರ" 1843 ಜುಲೈ 1ರಂದು ಹೊರಡಿಸುವ ಐತಿಹಾಸಿಕ ನಿರ್ಧಾರ ಕೈಗೊಂಡನು. ಈ ಪತ್ರಿಕೆ ಕನ್ನಡ ಪತ್ರಿಕಾ ಲೋಕಕ್ಕೆ ಮುನ್ನುಡಿ ಬರೆಯಿತು. ಈ ಮಹತ್ತರ ಕೊಡುಗೆಯ ಮೂಲಕ ಹರ್ಮನ ಪೆಡ್ರಿಕ್ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಆದ್ಯ ಪ್ರವರ್ತಕನಾದ. ಮೊಗ್ಲಿಂಗ್ ಮತಾಂತರಕ್ಕೆ ಮಹತ್ವ ನೀಡದೆ, ಜನಸಮೂಹದ ಬೌದ್ದಿಕ ಸುಧಾರಣೆಗೆ ಒತ್ತು ನೀಡಿದ ಮೇಧಾವಿ.

ಮೊಗ್ಲಿಂಗ್ ಹುಬ್ಬಳ್ಳಿ ಹಾಗೂ ಗದಗದಲ್ಲಿಯೂ ಕೆಲವು ಕಾಲ ಕಾರ್ಯನಿರ್ವಹಿಸಿದ್ದ. ಆಗ ಆ ಭಾಗವು ಧಾರವಾಡ ಜಿಲ್ಲೆಗೆ ಸೇರಿತ್ತು. ಮೊಗ್ಲಿಂಗ್ ಧಾರವಾಡ ಜಿಲ್ಲೆಯಿಂದ ಮಂಗಳೂರಿಗೆ ಬಂದು 1838ರಿಂದ 1852ರವರೆಗೆ ಸೇವೆಸಲ್ಲಿಸಿದ. ಈ ಅವಧಿಯಲ್ಲಿ ಆತ ಕೈಗೊಂಡ ಪ್ರಮುಖ ನಿರ್ಧಾರವೆಂದರೆ ಪತ್ರಿಕೆಯೊಂದನ್ನು ಪ್ರಕಟಿಸಿ, ಜನರಿಗೆ ಮಾಹಿತಿ ಒದಗಿಸುವುದು. 1843ರ ಜುಲೈ 1ರಂದು "ಮಂಗಳೂರು ಸಮಾಚಾರ" ಎಂಬ ಒಂದು ದುಡ್ಡಿನ ನಾಲ್ಕು ಪುಟಗಳ ಕಲ್ಲಚ್ಚಿನ ಪತ್ರಿಕೆಯನ್ನು ಹೊರತಂದ. ಅಂಚೆ ಹಾಗೂ ನೇರ ಮಾರಾಟಕ್ಕೆ ಸಹ ಲಬ್ಯವಿದ್ದ ಈ ಪತ್ರಿಕೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ವತ್ತಮಾನಗಳನ್ನು ಬಹು ಎಚ್ಚರಿಕೆಯಿಂದ ವರ್ಗೀಕರಿಸಿ ಪ್ರಕಟಿಸುತ್ತಿತ್ತು.

ಮೊಗ್ಲಿಂಗ್ ನ ಪತ್ರಿಕಾವೃತ್ತಿಯ ಬಹು ಮಹತ್ವದ ಅಂಶವೆಂದರೆ, ಧರ್ಮಪ್ರಚಾರ ಸಂಸ್ಥೆಯಿಂದ ಹೊರಡಿಸಲ್ಪಟ್ಟ ಪತ್ರಿಕೆಯಾದರೂ, "ಮಂಗಳೂರು ಸಮಾಚಾರ" ಎಲ್ಲ ಬಗೆಯ ವರ್ತಮಾನಗಳನ್ನು ಪ್ರಕಟಿಸುತ್ತಿತ್ತು. ಓದುಗರ ಕೂತುಹಲವನ್ನ ಅರಿತಿದ್ದ ಮೊಗ್ಲಿಂಗ್, ವತ್ತಮಾನಗಳನ್ನು ಬಹು ಎಚ್ಚರಿಕೆಯಿಂದ ಆಯ್ದು, ಭಾಷಾಂತರಿಸಿ ಸರಳ ಕನ್ನಡದಲ್ಲಿ ಪ್ರಕಟಿಸುತ್ತಿದ್ದ. ಇದೊಂದು ಸ್ವತಂತ್ರ ವಾರ್ತಾ ಪತ್ರಿಕೆ ಎನ್ನುವ ರೂಪುರೇಷೆ ಹೊಂದಿತ್ತು ಎಂಬುದು ವಿಶೇಷ. ಇಂಗ್ಲಿಷರ ಆಳ್ವಿಕೆಯ ಆ ಮಹತ್ವದ ದಿನಗಳಲ್ಲಿ ಬಹುತೇಕ ರಾಜಸಂಸ್ಥಾನಗಳು ನಾಶವಾಗಿ, ಕಂಪನಿ ಆಡಳಿತ ವಿಸ್ತಾರವಾಗುತ್ತಿದ್ದ ಕಾಲವದು. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಕಿರು ಪರಿಚಯಗಳನ್ನು ಈ ಪತ್ರಿಕೆ ಮಾಡುತ್ತಿತ್ತು. ಈ ಪ್ರಕಟಣೆಗೆ ಕನ್ನಡ ಭಾಷಿಕರಿಂದ ಬಂದ ಪ್ರತಿಕ್ರಿಯೆಯನ್ನು ಗಮನಿಸಿದ, ಮೊಗ್ಲಿಂಗ್ ಇದು "ಮಂಗಳೂರು ಸಮಾಚಾರ"ದ ಬದಲಾಗಿ "ಕನ್ನಡ ಸಮಾಚಾರ" ವಾದರೆ ತುಂಬ ಅರ್ಥಪೂರ್ಣವಾಗುತ್ತದೆ ಎಂದು ನಿಶ್ಚಯಿಸಿದ. ಕನ್ನಡ ಭಾಷಿಕರು ವಿಶಾಲವಾದ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂಬ ಅಂಶವನ್ನ ಆತ ಗಮನಿಸಿ ಪತ್ರಿಕೆಯ ಕ್ಷೇತ್ರ ವ್ಯಾಪ್ತಿ ವಿಸ್ತಾರವಾಗಬೇಕೆಂಬ ಕನಸು ಕಂಡ.

ಪತ್ರಕೆಯೊಂದರ ಮೂಲಕ ಎಲ್ಲ ಕನ್ನಡ ಭಾಷಿಕರನ್ನು ತಲುಪುವ ಹೆಬ್ಬಯಕೆ ಆತನದಾಗಿತ್ತು. ಸುಮಾರು ಎಂಟು ತಿಂಗಳು ಮಂಗಳೂರಿನಲ್ಲಿ ಪ್ರಕಟವಾದ ಈ ಪತ್ರ್ರಿಕೆ ಬಳ್ಳಾರಿಗೆ ಮಾರ್ಚ್ 1844ರಲ್ಲಿ ವರ್ಗಾವಣೆಗೊಂಡಿತು. ನಂತರ "ಕನ್ನಡ ಸಮಾಚಾರ"ವೆಂದು ಪುನರನಾಮಕರಣಕಗೊಂಡಿತು. ಬಳ್ಳಾರಿಯಲ್ಲಿ ಸುಮಾರು ಹತ್ತು ತಿಂಗಳ ಕಾಲ ಈ ಪತ್ರಿಕೆ ಪ್ರಕಟವಾಯಿತು. ಮೊಗ್ಲಿಂಗ್ ನಷ್ಟು ಕ್ರೀಯಾಶಾಲಿ ಸಮಾಚಾರ ಸಂಗ್ರಹಕಾರರು ಬಳ್ಳಾರಿಯಲ್ಲಿ ಲಭ್ಯವಾಗಲಿಲ್ಲ. ಮಂಗಳೂರಿನಲ್ಲಿದ್ದುಕೊಂಡು ಬಳ್ಳಾರಿಯಲ್ಲಿ ಪತ್ರಿಕೆ ನಡೆಸುವ ಆತನ ಸಾಹಸ ಯಶಸ್ವಿಯಾಗಲಿಲ್ಲ.

ಸಿಪಾಯಿ ದಂಗೆಯ ಬೆಳವಣಿಗೆಗಳನ್ನು ಜನತೆಗೆ ಮುಟ್ಟಿಸಬೇಕೆನ್ನುವ ಆಕಾಂಕ್ಷೆಯಿಂದ 13 ವರ್ಷಗಳ ನಂತರ "ಕಂನಡ ವಾರ್ತಿಕ" (ಕೆನರೀಸ್ ಮೆಸೆಂಜರ್) ಪತ್ರಿಕೆಯನ್ನು ಮೊಗ್ಲಿಂಗ್ ಆರಂಭಿಸಿದ. ಎರಕದಲ್ಲಿ ಹೊಯ್ದ ಅಚ್ಚು ಮೊಳೆಗಳನ್ನು ಮೊದಲ ಬಾರಿಗೆ ಈ ಪತ್ರಿಕೆ ಅಳವಡಿಸಿಕೊಂಡಿತ್ತು.

1836ರಿಂದ 1861ರವರೆಗೆ ಮೊಗ್ಲಿಂಗ್ ಪತ್ರಕರ್ತನಾಗಿ, ಸಾಹಿತಿಯಾಗಿ, ಶಿಕ್ಷಕನಾಗಿ, ಅನುವಾದಕನಾಗಿ, ಗಾದೆಗಳ ಸಂಗ್ರಹಕಾರನಾಗಿ ಅಮೋಘವಾದ ಸೇವೆ ಸಲ್ಲಿಸಿದ. ಆತನು ಕನ್ನಡ ಪತ್ರಿಕಾ ಕ್ಷೇತ್ರಕ್ಕೆ ಹಾಕಿಕೊಟ್ಟ ಬುನಾದಿ ಗಟ್ಟಿಯಾದದ್ದು. ಮಂಗಳೂರು, ಗದಗ, ಹುಬ್ಬಳ್ಳಿ ಮತ್ತು ಮಡಿಕೇರಿ ಆತನ ಪ್ರಮುಖ ಕಾರ್ಯಕ್ಷೇತ್ರಗಳಾಗಿದ್ದವು. ಹಲವೇ ತಿಂಗಳುಗಳ ಕಾಲ ಪತ್ರಿಕಾ ಪ್ರಕಟಣೆಯಲ್ಲಿ ತನ್ನ ಚತುರತೆಯನ್ನ ಮೊಗ್ಲಿಂಗ್ ಸಾಬೀತುಪಡಿಸಿ, ಕನ್ನಡ ಪತ್ರಿಕೋದ್ಯಮ ಬೆಳವಣಿಗೆಗೆ ತಳಪಾಯ ಹಾಕಿದ. ತಾನು ಬದುಕಿದ್ದ 70 ವರ್ಷಗಳ ಅವಧಿಯಲ್ಲಿ ಸುಮಾರು 25 ವರ್ಷಗಳ ಕಾಲ ಕನ್ನಡನಾಡಿನಲ್ಲಿ ಆತ ಸಲ್ಲಿಸಿದ ಸೇವೆ ಗುರುತರವಾದದ್ದು. ಪತ್ರಿಕಾ ದಿನಾಚರಣೆಯಂದು ಮೊಗ್ಲಿಂಗ್ ಸ್ಮರಣೆ ಮಾಡದಿದ್ದರೆ ಇಂಥದೊಂದು ದಿನಾಚರಣೆ ಆಚರಿಸಿದ್ದು ಅರ್ಥಪೂರ್ಣ ಎನಿಸುವುದಿಲ್ಲ. ಆದ್ದರಿಂದ ನಾನು ಮೊಗ್ಲಿಂಗ್ ಅವರ ಕಿರುಪರಿಚಯವನ್ನು ತಮ್ಮ ಮುಂದೆ ಇಟ್ಟಿದ್ದೇನೆ.

ಕಳೆದ 168 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ವೈವಿಧ್ಯಮಯವಾಗಿ ಬೆಳೆದಿದೆ. ಕನ್ನಡ ಪತ್ರಿಕೆಗಳ ಒಟ್ಟು ಪ್ರಸಾರ 30 ಲಕ್ಷಕ್ಕೆ ಏರಿದೆ. ಕನ್ನಡ ಭಾಷಿಕರ ಸಂಖ್ಯೆಗೆ ಹೋಲಿಸಿದರೆ ಇದು ಸಮಾಧಾನಕರವಲ್ಲ. ನೆರೆಯ ಕೇರಳದಲ್ಲಿ ಮಲೆಯಾಳ ಮನೋರಾಮ ದಿನಪತ್ರಿಕೆಯ ಪ್ರಸಾರ 17 ಲಕ್ಷ ಮೀರಿದೆ. ಅಲ್ಲಿ 10 ಲಕ್ಷಕ್ಕಿಂತ ಹೆಚ್ಚು ಮಾರಾಟವಾಗುವ ಮಾತೃಭೂಮಿ ಎನ್ನುವ ಇನ್ನೊಂದು ಪತ್ರಿಕೆಯಿದೆ. ತೆಲಗಿನ ಈ ನಾಡು ಪತ್ರಿಕೆ ಪ್ರತಿನಿತ್ಯ 23 ಲಕ್ಷ ಪ್ರತಿಗಳನ್ನು ಛಾಪಿಸುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೆಗಳ ಪ್ರಸಾರ ವ್ಯಾಪಕವಾಗಬೇಕಾಗಿದೆ. ಬನ್ನಿ ಪ್ರತಿ ಕನ್ನಡಿಗರ ಮನೆಯಲ್ಲಿಯೂ ಪತ್ರಿಕೆಗಳು ರಾರಾಜಿಸಲಿ. ಜ್ಞಾನ-ಮನರಂಜನೆ ವೈವಿಧ್ಯಮಯವಾಗಿ ಪತ್ರಿಕೆಗಳ ಮೂಲಕ ಲಭ್ಯವಾಗಲಿ ಎಂದು ಆಶಿಸುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.
ಎಲ್ಲರಿಗೂ ನಮಸ್ಕಾರ, ಕನ್ನಡ ಪತ್ರಿಕಾ ಕ್ಷೇತ್ರ ಚಿರಾಯುವಾಗಲಿ.

ಎಂ.ಎ.ಪೊನ್ನಪ್ಪ