ಗೋಪಾಲ್ ಹೆಗಡೆ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಉದ್ಯಾನನಗರಿಗೆ ಬರುವಾಗ ತಮ್ಮೊಂದಿಗೆ ವಿಶೇಷ ಶ್ರೇಯವನ್ನೂ ಹೊತ್ತು ತಂದಿದ್ದಾರೆ! ಹೌದು; ಅವರು ಕ್ರೀಡಾ ವರದಿಗಾರರೆಲ್ಲ ಹೆಮ್ಮೆಪಡುವಂಥ ಸಾಧನೆಯ ಹಿರಿಮೆಯೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ಅದೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ...?
ಹೆಚ್ಚು ಮಿದುಳಿಗೆ ಕಸರತ್ತು ಕೊಡುವ ಮುನ್ನವೇ ಹೇಳಿಬಿಡುತ್ತೇನೆ. ಕ್ರೀಡಾ ವರದಿಗಾರರಾಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟು ಬೆಳೆಯುತ್ತಾ ಸಾಗಿ; ಸಹ ಸಂಪಾದಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಗೋಪಾಲ್ ಹೆಗಡೆ ಅವರು ಈಗ "ಪ್ರಜಾವಾಣಿ" ಕನ್ನಡ ದಿನಪತ್ರಿಕೆಯ ಸಹ ಸಂಪಾದಕರು. ಅದೇ ವಿಶೇಷ. ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ವರದಿಗಾರರಾಗಿಯೇ ಹೆಸರು ಮಾಡಿ, ಆನಂತರ ಸಹ ಸಂಪಾದಕ ಹುದ್ದೆಗೆ ಏರಿದ ಶ್ರೇಯ ಗೋಪಾಲ್ ಹೆಗಡೆ ಅವರದ್ದು.
ದಶಕದ ಹಿಂದೆ ರಾಜ್ಯದ ರಾಜಧಾನಿಯಲ್ಲಿ ಇದ್ದುಕೊಂಡು ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಉತ್ಸಾಹಿ ಪದಾಧಿಕಾರಿಯಾಗಿ ಕೆಲಸ ಮಾಡಿದ ಗೋಪಾಲ್ ಹೆಗಡೆ ಅವರು ಕ್ರೀಡಾ ವರದಿಗಾರರ ಬಳಗವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರಿಗೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಪರವಾಗಿ ಅಭಿನಂದನೆ.